ನೀಲಿ ಹಸುರು ಪಾಚಿ

ಸಯನೋಫೈಟ ವಿಭಾಗಕ್ಕೆ ಸೇರಿದ ಪಾಚಿಗಳು (ಬ್ಲೂ ಗ್ರೀನ್ ಆಲ್ಜಿ). ಸುಮಾರು 250 ಜಾತಿ ಮತ್ತು 2,500 ಪ್ರಭೇದಗಳಿವೆ. ಇವುಗಳಿಗೆಲ್ಲ ಈ ಕೆಳಕಂಡ ಸಾಮಾನ್ಯ ಗುಣಲಕ್ಷಣಗಳುಂಟು:

	1. ನೀಲಿ ಹಸುರು ಪಾಚಿಗಳು ಆ ಹೆಸರೇ ಹೇಳುವಂತೆ ನೀಲಿಹಸುರು ಮಿಶ್ರ ಬಣ್ಣದವಾಗಿವೆ. ಈ ಬಣ್ಣ ಬರಲು ಕಾರಣ ಫೈಕೋಸಯನಿನ್ ಎಂಬ ಒಂದು ವರ್ಣಕ. ಇದು ಕ್ಲೋರೋಫಿಲ್ ಮತ್ತು ಕ್ಯಾರೊಟಿನಾಯಿಡ್ ವರ್ಣಕಗಳ ಜೊತೆಗೆ ಇರುತ್ತದೆ.

	2. ನಿರ್ದಿಷ್ಟ ಪ್ಲಾಸ್ಟಿಡ್‍ಗಳು ಇಲ್ಲ.

	3. ಇವುಗಳಲ್ಲಿ ವ್ಯವಸ್ಥಿತವಾದ ನ್ಯೂಕ್ಲಿಯಸ್ ಇಲ್ಲ. ನ್ಯೂಕ್ಲಿಯಸ್‍ಗೆ ನ್ಯೂಕ್ಲಿಯರ್ ಪದರ ಮತ್ತು ನ್ಯೂಕ್ಲಿಯಸ್ ಇಲ್ಲ. ಆದ್ದರಿಂದ ಇದಕ್ಕೆ ಇನ್ಸಿಪಿಯೆಂಟ್ ನ್ಯೂಕ್ಲಿಯಸ್ ಎಂದು ಹೆಸರು. ನ್ಯೂಕ್ಲಿಯಸ್ ಬರೀ ಕ್ರೊಮ್ಯಾಟಿನ್ ಕಣಗಳಿಂದ ಪ್ರತಿನಿಧಿಸಲ್ಪಟ್ಟಿದೆ. ಅಂದರೆ ನ್ಯೂಕ್ಲಿಯಸ್‍ನಲ್ಲಿರಬೇಕಾದ ಬಹು ಮುಖ್ಯ ಅಂಶಗಳೆಲ್ಲವೂ ಇವೆ.

0	4. ಲೈಂಗಿಕ ರೀತಿಯ ವಂಶಾಭಿವೃದ್ಧಿ ಇಲ್ಲ. (ಆದರೆ ಇತ್ತೀಚಿನ ಸಂಶೋಧನೆ ಲೈಂಗಿಕ ರೀತಿಯ ವಂಶಾಭಿವೃದ್ಧಿ ಇದೆ ಎಂಬುದನ್ನು ಸೂಚಿಸಿದೆ.) 

ನೀಲಿ ಹಸುರು ಪಾಚಿಗಳು ಹರಿಯುವ ಸಿಹಿನೀರಿನಲ್ಲಿ ಮತ್ತು ಉಪ್ಪು ನೀರಿನ ಸರೋವರದಲ್ಲಿ ಬೆಳೆಯುತ್ತವೆ. ಇವು ಸಮುದ್ರದಲ್ಲಿ ಕೂಡ ಬೆಳೆಯುವುದುಂಟು. ನೀರಿನಲ್ಲಿ ಬೆಳೆಯುವಂಥವು ಕೊಳೆವ ವಸ್ತುಗಳು ಹೆಚ್ಚಾಗಿರುವ ಕಡೆ ಹೇರಳವಾಗಿವೆ. ಅಲ್ಲದೆ ತೇವಾಂಶ ಹೆಚ್ಚಾಗಿರುವಂಥ ಸ್ಥಳಗಳಲ್ಲೂ ಇವನ್ನು ಕಾಣಬಹುದು. ಉದಾ: ಹೂವಿನ ಕುಂಡಗಳ ಪಾಶ್ರ್ವ, ಮರದ ತೊಗಟೆ ಇತ್ಯಾದಿ. ನೆಲದ ಮೇಲೆ ಬೆಳೆಯುವ ಕೆಲವು ಪ್ರಭೇದಗಳು ವಾಯುಮಂಡಲದಲ್ಲಿರುವ ನೈಟ್ರೊಜನ್ನನ್ನು ನೈಟ್ರೇಟ್ ಆಗಿ ಪರಿವರ್ತಿಸಿ ಸ್ಥಿರೀಕರಿಸುವ ಸಾಮಥ್ರ್ಯವನ್ನು ಪಡೆದಿವೆ. ಉದಾ: ನಾಸ್ಟಾಕ್, ಅನಬೀನ. ನೀರಿನಲ್ಲಿ ಗುಂಪು ಗುಂಪಾಗಿ ತೇಲುವ ಕೆಲವು ಬಗೆಗಳು ಆ ನೀರಿಗೆ ತಮ್ಮ ಬಣ್ಣವನ್ನು ಕೊಡಬಲ್ಲವು. ಇಂಥ ವಿದ್ಯಮಾನಕ್ಕೆ ವಾಟರ್ ಬ್ಲೂಮ್ ಎಂದು ಹೆಸರು. ಉದಾಹರಣೆ: ಸಮುದ್ರದಲ್ಲಿ ತೇಲುವ ಟ್ರೈಕೋಡೆಸ್‍ಮಿಯಮ್ ಎರಿತ್ರಿಯಮ್ ಎಂಬ ಪಾಚಿ. ಇದರಲ್ಲಿರುವ ಫೈಕೋಎರಿತ್ರಿನ್ ಎಂಬ ವರ್ಣಕದಿಂದಾಗಿ ಈ ಪಾಚಿ ಬೆಳೆಯುವ ಸಮುದ್ರ ಕೆಂಪಾಗಿ ಕಂಗೊಳಿಸುತ್ತದೆ.

	850 ಸೆ. ಉಷ್ಣತೆಯುಳ್ಳ ನೀರಿನಲ್ಲೂ ಬೆಳೆಯುವ ಸಾಮಥ್ರ್ಯ ಕೆಲವು ಪ್ರಭೇದಗಳಿಗುಂಟು. ಅಲ್ಲದೆ ಇತರ ಸಸ್ಯಗಳೊಡನೆ ಪರಸ್ಪರಾವಲಂಬಿ ಜೀವನವನ್ನು ನಡೆಸುವ ಪ್ರಭೇದಗಳೂ ಉಂಟು. ಉದಾಹರಣೆಗೆ ನಾಸ್ಟಾಕ್, ಅನಬೀನ ಮುಂತಾದವು ಸೈಕ್ಯಾಸ್ ಗಿಡದ ಬೇರಿನಲ್ಲಿ ಮತ್ತು ಅಂತಾಸಿರಸ್ ಸಸ್ಯದಲ್ಲಿ ಇರುತ್ತವೆ. ಕೆಲವು ನೀಲಿ ಹಸುರು ಪಾಚಿಗಳು ಶಿಲೀಂಧ್ರಗಳೊಡನೆ ಸೇರಿ ಕಲ್ಲು ಹೂಗಳಾಗಿ ರೂಪುಗೊಳ್ಳುತ್ತವೆ.
ಸಸ್ಯ ದೇಹದ ರಚನೆ: ಇಡೀ ಸಸ್ಯ ಜಗತ್ತಿನಲ್ಲಿ ನೀಲಿ ಹಸುರು ಪಾಚಿಗಳು ಅತಿ ಸರಳವಾದ ದೇಹರಚನೆಯನ್ನು ಪಡೆದಿವೆ. ಇಡೀ ಸಸ್ಯದೇಹ ಒಂದೇ ಜೀವಕೋಶದಿಂದ (ಉದಾ: ಗ್ಲಿಯೋಕ್ಯಾಪ್ಸ) ರಚಿತವಾಗಿರಬಹುದು ಅಥವಾ ಅನೇಕ ಜೀವಕೋಶಗಳು ಒಟ್ಟಿಗೆ ನಿವಹ (ಕಾಲನಿ) ರೂಪದಲ್ಲಿ ಇರಬಹುದು (ಉದಾ: ನಾಸ್ಟಾಕ್ ಅಸಿಲಟೋರಿಯ, ಅನಬೀನ, ರಿವ್ಯುಲೇರಿಯ) ನಿವಹ ಎಳೆಯ ಆಕಾರದಲ್ಲಿರುವುದೇ ಹೆಚ್ಚು. ಇದಕ್ಕೆ ಟ್ರೈಕೋಮ್ ಎಂದು ಹೆಸರು. ಪ್ರತಿ ನಿವಹದ ಸುತ್ತ ಜಿಲ್ಯಾಟಿನ್ ಎಂಬ ಅಂಟು ಪದಾರ್ಥವೂ ಉಂಟು.

	ಜೀವಕೋಶದ ರಚನೆಯೂ ಬಲು ಸರಳ. ಪ್ರತಿ ಜೀವಕೋಶದ ಸುತ್ತ ಸೆಲ್ಯುಲೋಸ್ ಮತ್ತು ಪೆಕ್ಟಿನ್‍ನಿಂದ ರಚಿತವಾದ ಕೋಶಭಿತ್ತಿಯುಂಟು. ಒಳಗಿರುವ ಜೀವರಸವನ್ನು ಎರಡು ಭಾಗಗಳನ್ನಾಗಿ ವಿಭಾಗಿಸಬಹುದು. ಹೊರಗಿನ ಭಾಗಕ್ಕೆ ಕ್ರೋಮೋಪ್ಲಾಸಮ್ ಎಂದೂ ಒಳಭಾಗಕ್ಕೆ ಸೆಂಟ್ರೋಪ್ಲಾಸಮ್ ಎಂದೂ ಹೆಸರು. ಸೆಂಟ್ರೊಪ್ಲಾಸಮಿನಲ್ಲಿ ಡಿಎನ್‍ಎ. ಆರ್‍ಎನ್‍ಎ ಮತ್ತು ಪ್ರೋಟೀನುಗಳಿವೆ. ಇದನ್ನೇ ಇನ್‍ಸಿಪಿಯೆಂಟ್ ನ್ಯೂಕ್ಲಿಯಸ್ ಎನ್ನುವುದು. ಹೊರಗಿನ ಕ್ರೋಮೊಪ್ಲಾಸಮಿನಲ್ಲಿ ಕ್ಲೋರೋಫಿಲ್, ಕ್ಯಾರೊಟಿನ್, ಮಿಕ್ಸೊಕ್ಸಾಂತಿನ್, ಕ್ಸಾಂತೋಫಿಲ್ ಮತ್ತು ಫೈಕೋಎರಿತ್ರಿನ್ ಎಂಬ ವರ್ಣಕಗಳು ಅಡಕವಾಗಿವೆ. ಜೊತೆಗೆ ತೈಲ, ಗ್ಲೈಕೋಜನ್ ಮತ್ತು ಸಯಾನೊಫೈಸಿಯಮ್ ಕಣಗಳು ಇರುತ್ತವೆ. ಗಾಳಿ ತುಂಬಿದ ಅವಕಾಶಗಳು ಪಾಲಿಸಿಸ್‍ಟಿಸ್ ಮತ್ತು ಅನಬೀನ ಕ್ರೋಮೊಪ್ಲಾಸಮ್‍ನಲ್ಲಿ ಇವೆ. ಈ ಅವಕಾಶಗಳಲ್ಲಿ ನೈಟ್ರೊಜನ್ ಅಥವಾ ಆಕ್ಸಿಜನ್ ತುಂಬಿರುತ್ತವೆ.

	ಜೀವಕೋಶದಲ್ಲಿ ಕ್ಲೋರೋಫಿಲ್ ಮತ್ತು ಫೈಕೋಎರಿತ್ರಿನ್ ವರ್ಣಕಗಳಿರುವುದರಿಂದ ಸಸ್ಯ ತನ್ನ ಆಹಾರವನ್ನು ದ್ಯುತಿಸಂಶ್ಲೇಷಣೆಯ ಮುಖಾಂತರ ತಯಾರಿಸಿಕೊಳ್ಳುತ್ತದೆ. ಮೊದಲು ತಯಾರಾಗುವುದು ಸಕ್ಕರೆ ಮತ್ತು ಗ್ಲೈಕೋಜನ್. ಅನಂತರ ಇವು ಗ್ಲೈಕೋಪ್ರೋಟೀನ್ ಆಗಿ ಪರಿವರ್ತಿತವಾಗುವುವು.

	ಎಳೆಯ ಆಕಾರದ ದೇಹವುಳ್ಳ ನೀಲಿ ಹಸುರು ಪಾಚಿಗಳಲ್ಲಿ, ಆಸಿಲಟೋರಿಯೇಸೀ ಕುಟುಂಬದ ಸದಸ್ಯರನ್ನುಳಿದು ಬೇರೆಯವುಗಳಲ್ಲಿ ದಪ್ಪಕೋಶ ಭಿತ್ತಿಯಿರುವ ಹಳದಿ ಬಣ್ಣದ ದಪ್ಪವಾದ ಜೀವಕೋಶವಿದೆ. ಇದನ್ನು ಹೆಟರೋಸಿಸ್ಟ್ ಎನ್ನುತ್ತಾರೆ. ಇದು ಎರಡು ಜೀವಕೋಶಗಳ ಮಧ್ಯೆ ಇರಬಹುದು ಅಥವಾ ಎಳೆಯ ತುದಿಯಲ್ಲಿರಬಹುದು. ಇದಕ್ಕೆ ಎರಡು ಇಲ್ಲವೆ ಒಂದು ರಂಧ್ರವಿರುತ್ತದೆ. ಇದರ ನಿರ್ದಿಷ್ಟವಾದ ಕಾರ್ಯವೇನೆಂದು ಇನ್ನೂ ತಿಳಿದುಬಂದಿಲ್ಲ. ಆದರೂ ಇದು ಕೆಲವು ಪರೋಕ್ಷ ಕಾರ್ಯಗಳನ್ನು ಎಸಗುತ್ತದೆ. ಎಂಬುದನ್ನು ಇತ್ತೀಚೆಗೆ ಗಮನಿಸಲಾಗಿದೆ. 1. ಆಹಾರ ಶೇಖರಣೆ. 2. ಎಳೆಗಳನ್ನು ಹಾರ್ಮೊಗೋನಿಯ ಎಂಬ ರಚನೆಯಿಂದ ಪುನರುತ್ಪಾದನೆಗೊಳಿಸುವುದರಲ್ಲಿ ಭಾಗಿಯಾಗುವುದು; 3. ನೈಟ್ರೋಜನ್ ಸ್ಥಿರೀಕರಣದಲ್ಲಿ ಪ್ರಮುಖ ಪಾತ್ರ ವಹಿಸುವುದು.

ಸಂತಾನಾಭಿವೃದ್ಧಿ : ಅಬೀಜ ಮತ್ತು ನಿರ್ಲಿಂಗ ರೀತಿಯ ಸಂತಾನಕ್ರಿಯೆ ಸಾಮಾನ್ಯ. ಲೈಂಗಿಕ ಸಂತಾನಕ್ರಿಯೆ ಇದೆಯೆಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.

ಅಬೀಜ ರೀತಿಯ ಸಂತಾನಾಭಿವೃದ್ಧಿ: ಏಕಕೋಶ ಜೀವಿಗಳಲ್ಲಿ ಜೀವಕೋಶ ವಿಭಜನೆಯಿಂದಲೂ ಬಹುತೇಕ ಜೀವಿಗಳಲ್ಲಿ ಖಂಡನ ಕ್ರಿಯೆಯಿಂದಲೂ ಇದು ನಡೆಯುತ್ತದೆ. ಟ್ರೈಕೋಮುಗಳು (ಅಂದರೆ ಎಳೆಯ ಆಕಾರದ ದೇಹ) ಸಣ್ಣ ಸಣ್ಣ ತುಂಡುಗಳಾಗಿ ಖಂಡನಗೊಳ್ಳುತ್ತದೆ. ಒಂದೊಂದು ತುಂಡಿಗೂ ಹಾರ್ಮೊಗೊನಿಯಮ್ ಎಂದು ಹೆಸರು. ಇದು ಹೆಟರೋಸಿಸ್ಟ್ ಇರುವ ಜಾಗದಲ್ಲಿ ಅಥವಾ ಅಕ್ಕಪಕ್ಕದ ಜೀವಕೋಶಗಳಲ್ಲಿ ಉಂಟಾಗುತ್ತದೆ. ಹಾರ್ಮೊಗೋನಿಯವು ಹಲವಾರು ಕೋಶ ವಿಭಜನೆಗಳಿಂದ ಹೊಸ ಜೀವಿಗಳನ್ನು ಉತ್ಪತ್ತಿ ಮಾಡುತ್ತದೆ.

ಅನಾನುಕೂಲ ಸಂದರ್ಭಗಳಲ್ಲಿ ಎಳೆಯಾಕಾರದ ಸಸ್ಯಗಳು (ಉದಾ: ನಾಸ್ಟಾಕ್, ನ್ಯುಡುಲೇರಿಯ) ಎಕೈನೈಟ್ಸ್ ಎಂಬ ರಚನೆಗಳನ್ನು ಉತ್ಪತ್ತಿಮಾಡುತ್ತದೆ. ಕೆಲವು ಜೀವಕೋಶಗಳು ಆಹಾರ ಶೇಖರಣೆಯಿಂದ ಊದಿಕೊಳ್ಳುತ್ತವೆ. ಇಂಥ ಜೀವಕೋಶಕ್ಕೆ ದಪ್ಪ ಗೋಡೆ ಇರುತ್ತದೆ. ಒಂದು ಎಳೆಯಲ್ಲಿ ಒಂದು ಅಥವಾ ಒಂದಕ್ಕಿಂತ ಜಾಸ್ತಿ ಇರಬಹುದು. ಹೆಟರೋಸಿಸ್ಟ್ ಇರುವ ಜಾಗದಲ್ಲಿ ಎಕೈನೈಟ್‍ಗಳು ಉತ್ಪತ್ತಿಯಾಗುವುದಿಲ್ಲ. ಎಕೈನೈಟ್‍ಗಳು ಅನುಕೂಲ ವಾತಾವರಣ ಒದಗಿಬಂದಾಗ ಎಳೆಯಾಕಾರದ ಸಸ್ಯವಾಗಿ ಬೆಳೆಯುತ್ತವೆ.

	ಕೆಲವು ಜೀವಿಗಳು ಜೀವಕೋಶದ ಒಳಗೆ ಚಿಕ್ಕ ಗಾತ್ರದ ಬೀಜಾಣುಗಳನ್ನು ಉತ್ಪತ್ತಿ ಮಾಡುತ್ತವೆ. ಇದಕ್ಕೆ ಎಂಡೊಸ್ಪೋರ್ ಎಂದು ಹೆಸರು. ಉದಾ: ಡರ್ಮೋಕಾರ್ಪ.

	ವರ್ಗಿಕರಣ: ನೀಲಿ ಹಸುರು ಪಾಚಿಗಳ ಗುಂಪನ್ನು ಐದು ಗಣಗಳಾಗಿ ವಿಂಗಡಿಸಲಾಗಿದೆ:
ಕ್ರೂಕಾಕೇಲಿಸ್, 2. ಕೀಮೋಸೈಫೊನೇಲಿಸ್, 3. ಪ್ಲೂರೋಕ್ಯಾಪ್ಲೇಲಿಸ್, 4. ನಾಸ್ಟಕೇಲಿಸ್, 5. ಸ್ಟಿಗೋನಿಮಟೇಲಿಸ್.
ಸ್ಮಿತ್ ಪ್ರಕಾರ ಈ ವರ್ಗದಲ್ಲಿ ಮೂರು ಗುಂಪುಗಳಿವೆ: 

ಕ್ರೂಕಾಕೇಲಿಸ್, 2. ಕೀಮೋಸೈಪೊನೇಲಿಸ್, 3. ಹಾರ್ಮೊಗೊನೇಲಿನ್.
ನೀಲಿ ಹಸುರು ಪಾಚಿಗಳು ಪ್ರಾಚೀನ ಸಸ್ಯಗಳು, ಅಂದರೆ ಭೂಮಿಯ ಮೇಲೆ ಮೊಟ್ಟ ಮೊದಲನೆಯ ಬಾರಿಗೆ ಕಾಣಿಸಿಕೊಂಡ ಹಸುರು ಸಸ್ಯಗಳಿವು. ಇವು ಮೀನು ಮತ್ತು ಇತರ ಜಲಚರ ಪ್ರಾಣಿಗಳಿಗೆ ಆಹಾರವಾಗಿ ಉಪಯೋಗವಾಗುತ್ತದೆ. ನಾಸ್ಟಾಕ್ ಹಾಗೂ ಇನ್ನು ಕೆಲವು ನೀಲಿ ಹಸುರು ಪಾಚಿಗಳನ್ನು ಸೂಪ್ ತಯಾರಿಕೆಯಲ್ಲಿ ಬಳಸುವುದಿದೆ. ಅಲ್ಲದೆ ಈ ವರ್ಗದ ಕೆಲವು ಸಸ್ಯಗಳು ಮಣ್ಣಿನ ಸಾರವನ್ನು ಹೆಚ್ಚಿಸಲು ನೆರವಾಗುತ್ತವೆ. ಏಕೆಂದರೆ ಬ್ಯಾಕ್ಟೀರಿಯಗಳಂತೆ ಇವು ಕೂಡ ವಾತಾವರಣದ ಸಾರಜನಕವನ್ನು ಸ್ಥಿರೀಕರಿಸಿ ಮಣ್ಣನ್ನು ಫಲವತ್ತಾಗಿ ಮಾಡುತ್ತವೆ. ನಾಸ್ಟಾಕ್, ಅನಬೀನ, ಆಸಿಲ್ಲಟೋರಿಯ, ಸಿಲಿಂಡ್ರೋಸ್ಪರ್ಮಮ್ ಮುಂತಾದವನ್ನು ಬತ್ತದ ಗದ್ದೆಗಳಲ್ಲಿ ಉಪಯೋಗಿಸಿ ಬೆಳೆಯನ್ನು ಹೆಚ್ಚಿಸಿದ ಸಂದರ್ಭಗಳೂ ಇವೆ.

	ಕೆಲವು ನೀಲಿ ಹಸುರು ಪಾಚಿಗಳು ಹಾನಿಕಾರಕವಾಗಿಯೂ ಇವೆ. ಇವು ನೀರಿನಲ್ಲಿ ಸಮೃದ್ಧವಾಗಿ ಬೆಳೆದಲ್ಲಿ ಆ ನೀರು ಕುಡಿಯಲು ಅಯೋಗ್ಯವಾಗುತ್ತದೆ. ನೀರು ಶೇಖರಿಸುವ ತೊಟ್ಟಿಗಳಲ್ಲಿ ಇವು ಬೆಳೆಯುವುದರಿಂದ ನೀರಿನಲ್ಲಿ ಆಕ್ಸಿಜನ್ ಕೊರತೆಯುಂಟಾಗುತ್ತದೆ. ತತ್ಫಲವಾಗಿ ಮೀನುಗಳೂ ಸಾಯುವ ಸಂಭವವಿದೆ. ಮೈಕ್ರೋಸಿಸ್ಟಿಸ್ ಮತ್ತು ಅನಬೀನ ಮೊದಲಾದ ಪಾಚಿಗಳಿರುವ ನೀರನ್ನು ಹಸುಗಳು ಕುಡಿದು ಕಾಯಿಲೆ ಬಿದ್ದಿರುವ ಸಂದರ್ಭಗಳೂ ಇವೆ. ಇವುಗಳಲ್ಲಿ ಪಿತ್ತಜನಕಾಂಗ, ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ಕಾಯಿಲೆಗಳೂ ಉಂಟಾಗಿ ಅವುಗಳ ಸಾವಿಗೆ ಮೂಲ ಕಾರಣವಾಗುತ್ತದೆ. ಮೈಕ್ರೋಸಿಸ್ಟಿಸ್ ಒಂದು ವಿಧದ ವಿಷ ಪದಾರ್ಥವನ್ನುಂಟುಮಾಡುತ್ತದೆ. ಕುಡಿಯುವ ನೀರಿನಲ್ಲಿ ಆಸಿಲಟೋರಿಯ ಪಾಚಿಗಳೂ ಸೇರಿದ್ದರೆ ಆಸ್ತಮಾಕ್ಕೂ ಕಾರಣವಾಗುವುದುಂಟು. ಸ್ವಲ್ಪ ಮೈಲುತುತ್ತವನ್ನು ನೀರಿಗೆ ಬೆರೆಸುವುದರಿಂದ ನೀಲಿ ಹಸುರು ಪಾಚಿಗಳ ಬೆಳವಣಿಗೆಯನ್ನು ನಿಲ್ಲಿಸಬಹುದು.

	ನೀಲಿ ಹಸುರು ಪಾಚಿಗಳನ್ನು ಅತಿ ಪ್ರಾಚೀನ ಸಸ್ಯಗಳೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ಇವುಗಳಲ್ಲಿ ನಿರ್ದಿಷ್ಟ ನ್ಯೂಕ್ಲಿಯಸ್ ಇಲ್ಲದಿರುವುದು, ಲೈಂಗಿಕ ಸಂತಾನಾಭಿವೃದ್ಧಿ ಇಲ್ಲದಿರುವುದು ಮತ್ತು ವರ್ಣಕಗಳು ಗೊತ್ತಾದ ರಚನೆಗಳಲ್ಲಿ ಅಡಕವಾಗಿಲ್ಲದಿರುವುದು.

	 ವರ್ಗದ ಸಸ್ಯಗಳು ಯಾವ ಜೀವಿಗಳಿಂದ ಉಗಮವಾಗಿವೆ ಎಂಬುದನ್ನು ಕಂಡುಹಿಡಿಯುವುದು ಬಲುಕಷ್ಟ. ಫ್ರಿಚ್‍ನ ದೃಷ್ಟಿಯಲ್ಲಿ ಕಶಗಳಿಲ್ಲದ ಕೆಲವು ಜೀವಿಗಳು ಇವುಗಳ ಉಗಮಕ್ಕೆ ಕಾರಣ. ನೀಲಿ ಹಸುರು ಪಾಚಿಗಳಲ್ಲಿರುವ ಕ್ರೂಕಾಕೇಲಿಸ್ ಎಂಬ ವರ್ಗ ಭೂಮಿಯ ಮೇಲೆ ಬೆಳೆಯುವ ಅತ್ಯಂತ ಪ್ರಾಚೀನ ವರ್ಗವಾದುದರಿಂದ ಇದರ ಉಗಮ ಭೂಸಸ್ಯಗಳಿಂದಲೇ ಆಗಿದೆ ಎಂದು ಫ್ರಿಚ್ ಊಹಿಸಿದ್ದಾನೆ.

	ಹಲವಾರು ಸಸ್ಯಶಾಸ್ತ್ರಜ್ಞರ ಪ್ರಕಾರ ನೀಲಿ ಹಸುರು ಮತ್ತು ಕೆಂಪು ಪಾಚಿಗಳಿಗೆ ಒಂದೇ ರೀತಿಯ ಉಗಮವಿದೆ. ಕಾರಣ ಇವೆರಡರಲ್ಲಿಯೂ ಒಂದೇ ಬಗೆಯ ವರ್ಣಕಗಳ ಇರುವಿಕೆ ಮತ್ತು ಚಲನೆಯುಳ್ಳ ಸ್ಪೋರುಗಳ ಕೊರತೆ.
(ಕೆ.ಎನ್.ಜಿ.)

ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ